ಮಲೇರಿಯಾ
	ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಏಕಕಣ ರೋಗಾಣುಗಳ ಸೋಂಕಿನಿಂದ ಉಂಟಾಗುವ ಕಾಯಿಲೆ ಮಲೇರಿಯ. ನಿಗದಿತವಾಗಿ ಚಳಿ (ನಡುಕ), ಜ್ವರ, ಮೈಬೆವರುವುದು ಕಾಣುವುದು ಮಲೇರಿಯಾ ರೋಗದ ವಿಶಿಷ್ಟ ಲಕ್ಷಣ. ಅನಾಫಿಲಿಸ್ ವಿಧದ ಹೆಣ್ಣು ಸೊಳ್ಳೆಗಳು ಈ ಕಾಯಿಲೆಯನ್ನು ಹರಡುತ್ತದೆ. 
ಇತಿಹಾಸದುದ್ದಕ್ಕೂ ಮಲೇರಿಯಾ ಮಾನವನನ್ನೂ ಕಾಡುತ್ತಲೇ ಬಂದಿದೆ. ಜಗತ್ತಿನ ಇತಿಹಾಸದಲ್ಲಿ ಮಲೇರಿಯಾ ಮಲೇರಿಯಾದಿಂದ ಉಂಟಾದಷ್ಟು ಸಾವು ನೋವುಗಲು ಬೇರಾವ ಕಾಯಿಲೆಯಿಂದಾಗಲೀ, ಯುದ್ದಗಳಿಂದಾಗಲೀ ಸಂಭವಿಸಿಲ್ಲ.

ವಿಶ್ವದಾದ್ಯಂತ ಮಲೇರಿಯಾ ಕಂಡಿದೆ. ಭೂಮದ್ಯ ರೇಖೆಯ  60ಲಿ ಉತ್ತರ ಹಾಗೂ 44ಲಿ ದಕ್ಷಿಣದೊಳಗಿನ ಉಷ್ಣ ಪ್ರದೇಶಗಳಲ್ಲಿ ಮಲೇರಿಯಾ ಹಾವಳಿ ಹೆಚ್ಚಾಗಿದೆ. ಮಲೇರಿಯಾಕ್ಕೆ ಉಷ್ಣವಲಯದ ಕಾಯಿಲೆಗಳ ರಾಜ ಎಂಬ ಬಿರುದಿದೆ. 

ಈಗ ಮಲೇರಿಯಾ ಉಪಟಳ ಕಡಿಮೆಯಾಗಿದೆ. ಆದಾಗ್ಯೂ ಈಗಲೂ ವಿಶ್ವದಲ್ಲಿ ಪ್ರತಿವರ್ಷ 300 ರಿಂದ 500 ಮಿಲಿಯನ್ ಜನರಿಗೆ ಕಾಯಿಲೆ ತಗುಲುತ್ತಿದೆ. ಒಂದುವರೆ ಇಂದ ಎರಡುವರೆ ಮಿಲಿಯನ್ ಜನರು ಪ್ರತಿವರ್ಷ ಮಲೇರಿಯಾದಿಂದಾಗಿ ಸಾಯುತ್ತಿದ್ದಾರೆ. ಮಲೇರಿಯಾದಿಂದಾಗಿ 39267000 ಮಾನವ ದುಡಿಮೆ ವರ್ಷಗಳು ಹಾಳಾಗುತ್ತಿವೆ. ಮಾನವನ ಆರ್ಥಿಕ ಸಾಮಾಜಿಕ ರಾಜಕೀಯ ಔದ್ಯೋಗಿಕ ರಂಗಗಳೆಲ್ಲಾ ಮಲೇರಿಯಾದಿಂದ ನಡುಗಿದೆ.

	ವಿವಿಧ ದೇಶಗಳಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ಪ್ರದೇಶಗಳಲ್ಲಿ ಪ್ರತ್ಯೇಕ ಅನಾಫಲಿಸ್ ಉಪಜಾತಿಯ ಸೊಳ್ಳೆಗಳು ಮಲೇರಿಯಾವನ್ನು ಹರಡುತ್ತಿವೆ. ಹೆಣ್ಣು ಸೊಳ್ಳೆಗಳು ಮಾತ್ರ ರೋಗವಾಹಕವಾಗಿವೆ.

	ಮಲೇರಿಯಾಕ್ಕೆ ಕಾರಣವಾದ ಪ್ಲಾಸ್ಮೋಡಿಯಂ ಪರಾವಲಂಬಿಗಳಲ್ಲಿ ಪ್ಲಾ.ಮಲೇರಿಯಾ, ಪ್ಲಾ ವಿವಾಕ್ಸ್, ಪ್ಲಾ ಫಾಲ್ಸಿ ಫಾರಮ್, ಮತ್ತು ಪ್ಲಾ ಓವೆಲ್ ಉಪಜಾತಿಗಳು ಮಲೇರಿಯ ಕಾಯಿಲೆ ಕಾರಕಗಳಾಗಿವೆ. ನಮ್ಮ ದೇಶದಲ್ಲಿ ತಲೆದೋರುವ 75-80% ಮಲೇರಿಯಾಕ್ಕೆ ಪ್ಲಾಸ್ಮೋಡಿಯಂ ವಿವಾಕ್ಸ್ ಕಾರಣ. ಶೇಕಡಾ 15-25% ಪ್ರಕರಣಗಳಿಗೆ ಪ್ಲಾ ಫಾಲ್ಸಿಫಾರಮ್ ಕಾರಣ.   ಪ್ಲಾ.ಮಲೇರಿಯಾ ತುಮಕೂರು ಹಾಸನ ಜಿಲ್ಲೆಗೆ ಸೀಮಿತವಾಗಿದೆ. ಪ್ಲಾ ಓವೆಲ್ ನಮ್ಮ ದೇಶದಲ್ಲಿ ಇಲ್ಲ.

	ಮಲೇರಿಯಾ ರೋಗಾಣುಗಳು ಮಾನವನ ಕೆಂಪು ರಕ್ತಕಣಗಳಲ್ಲಿ ಸೇರಿ ಅಲೈಂಗಿಕವಾಗಿ ತಮ್ಮ ಸಂತಾನ ವೃದ್ದಿಸಿಕೊಳ್ಳತ್ತದೆ. ಅನಾಫಲಿಸ್ ಹೆಣ್ಣು ಸೊಳ್ಳೆಯ ದೇಹದಲ್ಲಿ ರೋಗಾಣುಗಳು ಲೈಂಗಿಕವಾಗಿ ಅಭಿವೃದ್ದಿಗೊಳ್ಳುತ್ತದೆ.

	ರೋಗಾಣುಯುಕ್ತ ಸೊಳ್ಳೆ ಮಾನವನನ್ನು ಕಚ್ಚಿದಾಗ ತಮ್ಮ ಜೊಲ್ಲಿನಲ್ಲಿರುವ ರೋಗಾಣುವನ್ನು (ಸ್ಪೋರೋಜಾಯಿಡ್ ರೂಪದ) ಮಾನವ ರಕ್ತಕ್ಕೆ ಸೇರಿಸುತ್ತದೆ. ಈ ರೋಗಾಣುಗಳು ಯಕೃತ್ ನಲ್ಲಿ ತಾತ್ಕಾಲಿಕವಾಗಿ ನೆಲೆಸುತ್ತವೆಯಾದರೂ ಕೆಂಪು ರಕ್ತಕಣಗಳಲ್ಲಿ ನೆಲೆಸಿ ರಕ್ತಕಣಗಳನ್ನು ದ್ವಂಸಗೊಳಿಸುತ್ತದೆ. ಹೀಗಾಗಿ ಮಲೇರಿಯಾ ಬಂದರೆ ರಕ್ತಹೀನತೆಯೂ ಉಂಟಾಗುತ್ತದೆ. ರಕ್ತಕಣಗಳನ್ನು ಒಡೆದುಕೊಂದು ರೋಗಾಣುಗಳು ಹೊಸ ಹೊಸ ಕೆಂಪು ರಕ್ತಕಣಗಳನ್ನು  ಸೇರಿಕೊಳ್ಳುತ್ತದೆ. ಹೀಗೆ ಮಾನವದೇಹದಲ್ಲಿ ಪ್ಲಾಸ್ಮೋಡಿಯಂ ರೋಗಾಣುವಿನ  ಬದುಕು ಸಾಗುತ್ತಿರುತ್ತದೆ.

	ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆ ಮಲೇರಿಯಾ ಪೀಡಿತ ಮಾನವನನ್ನು ಕಚ್ಚಿ ರಕ್ತ ಹೀರುವಾಗ ರೋಗಾಣುಗಳನ್ನು ಹೀರಿಕೊಳ್ಳುತ್ತದೆ. ಸೊಳ್ಳೆಯ ಜಠರದಲ್ಲಿ ರೋಗಾಣುವಿನ ಗಂಡು ಹೆಣ್ಣು ಜೀವ ಕಣಗಳು ಮಿಲನಗೊಂಡು ಜಠರದ ಮಾಂಸಖಂಡದಲ್ಲಿ ಅವಿತು ವಿಭಜನೆಗೊಳ್ಳುತ್ತದೆ. ಉತ್ಪತ್ತಿಯಾದ ಸ್ಪೋರೋಜಾಯಿಡ್ ರೂಪದ ರೋಗಾಣುಗಳು ಸೊಳ್ಳೆಯ ಜೊಲ್ಲು ಗ್ರಂಥಿಯಲ್ಲಿ ಸೇರಿಕೊಳ್ಳುತ್ತದೆ. ಸೊಳ್ಳೆ ಮಾನವನನ್ನು ಕಚ್ಚುವಾಗ ಈ ರೋಗಾಣುಗಳು ಮಾನವ ದೇಹಕ್ಕೆ ಸೇರುತ್ತದೆ.

ನಡುಕ ತರುವ ಚಳಿ, ಕೆಂಡದಂತೆ ಕಾಯುವ ಜ್ವರ, ಮೈ ತೋಯಿಸುವ ಬೆವರು, ಗುಲ್ಮದ ಊತ, ಹಾಗೂ ರಕ್ತ ಹೀನತೆ ಮಲೇರಿಯಾ ರೋಗದ ಲಕ್ಷಣಗಳು.
ಮಲೇರಿಯಾ ಜ್ವರಕ್ಕೆ  ಉತ್ತಮ ಚಿಕಿತ್ಸೆ ಇದೆ. ಮಲೇರಿಯಾ ಪೀಡಿತ ಪ್ರದೇಶಗಳಿಗೆ ಹೋಗುವಾಗ ರಕ್ಷಣೆದೊರಕಿಸುವ ಮಾತ್ರೆಗಳಿವೆ. ಲಸಿಕೆಗಾಗಿ ಸಂಶೋಧನೆಗಳು ನಡೆದಿವೆ. ಮಲೇರಿಯಾಕ್ಕೆ ಕಡಿವಾಣ ಹಾಕಲು ರಾಷ್ಟ್ರವ್ಯಾಪಿ ಮಲೇರಿಯಾ ನಿರ್ಮೂಲನ ಕಾರ್ಯಕ್ರಮ ಜಾರಿಯಲ್ಲದೆ. ಮಲೇರಿಯಾ ನಿಯಂತ್ರಣದಲ್ಲಿ ಸೊಳ್ಳೆಗಳ ಸಂಹಾರ, ಜಲನಿರ್ವಹಣೆ, ಪರಿಸರ ಸ್ವಚ್ಚತೆ ಅತಿ ಮುಖ್ಯ.

ಸೊಳ್ಳೆಯ ಜಠರದಲ್ಲಿ ಮಲೇರಿಯಾ ರೋಗಾಣುಗಳು ವೃದ್ಧಿಗೊಳ್ಳುವುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ